Thursday 25 June 2015

ಚಿಗುರು ಫಾರ್ಮ್ ನಲ್ಲಿ  ಏನೇನಿದೆ? ಒಂದು ಶಬ್ದಚಿತ್ರ, ಒಂದು ಮಾರ್ಗದರ್ಶಿ ಪ್ರವಾಸ.

೨೫ ಎಕರೆ ವಿಸ್ತೀರ್ಣದ ಚಿಗುರು ಫಾರ್ಮ್ ನ ಪ್ರವೇಶ ದ್ವಾರದ ಎರಡೂ ಪಕ್ಕದಲ್ಲಿ ತಲೆಯೆತ್ತಿ ನಿಂತಿರುವ ತೇಗ ಮತ್ತು ಸಿಲ್ವರ್ ಓಕ್ ಮರಗಳು ಮುಂದೆ ತೋಟದುದ್ದಕ್ಕೂ ದಾರಿ ತೋರುತ್ತವೆ.
ಸ್ವಲ್ಪ ಮುಂದಡಿಯಿಟ್ಟರೆ ಸ್ವಾಗತಕೋರುವ ಅಡಿಕೆ ಮರಗಳು.
ಅಲ್ಲೇ  ಎಡ-ಬಲ ಮೂಲೆಗಳಲ್ಲಿ  ಮಳೆನೀರು-ಕೊಯ್ಲಿನಿಂದ ಕಂಗೊಳಿಸುವ ಚಿಕ್ಕ ಆಣೆಕಟ್ಟು ಮತ್ತು ಪುಷ್ಕರಣಿ/ಕಲ್ಯಾಣಿ.
ಅಣೆಕಟ್ಟಿನಿಂದಾಚೆ ಸ್ವಲ್ಪ ದೂರದಲ್ಲಿ ವರ್ಷವಿಡೀ ಆಕರ್ಷಕ ಹೂ/ಕಾಯಿ ಬಿಡುವ ಪನ್ನೇರಳೆ ಹಣ್ಣಿನ ತೋಟ.
ಕಲ್ಯಾಣಿಯಿಂದ ಮುಂದೆ ಬಲಕ್ಕೆ ಕಾಣುವ ಕೆಲವು ಬೆಟ್ಟದ ನೆಲ್ಲಿಯ ಗಿಡಗಳು.
ಅಲ್ಲಿಂದ ಸ್ವಲ್ಪ ಮೇಲಕ್ಕೆ ಎರೆಗೊಬ್ಬರ ತಯಾರಿಸುವ ಗುಂಡಿಗಳು.
ಇನ್ನೂ ಮೇಲಿನ ಟೆರೇಸ್ ನಲ್ಲಿ ಗೊಬ್ಬರಕ್ಕೆ ಸಾವಯವ ಉತ್ಪನ್ನಗಳನ್ನು ಕತ್ತರಿಸಿ ಒದಗಿಸುವ ಶಾಫ್-ಕಟ್ಟಿಂಗ್ ಕಟ್ಟಡ.
ಈಗ ತಲುಪಿದ ತೋಟದ ಒಂದು ಅಂಚಿನಲ್ಲೊಂದು ಆಲದಮರ. ಇದರ ಬಿಳಿಲುಗಳು ನಿಮ್ಮನ್ನು ಜೋಕಾಲಿಯಾಡಲು ಆಮಂತ್ರಿಸುತ್ತಿವೆ.
ಅಂಚಿನಿಂದ  ಹೊರಗೆ ದೊಡ್ಡದೊಂದು ಸರ್ಕಾರಿ ಕೆರೆ. ಇದು ಚಿಗುರು ಫಾರ್ಮ್ ನ ಜೇವನಾಡಿ.

ಇತ್ತ ಬಲಕ್ಕೆ ತಿರುಗಿ ಮುನ್ನಡೆಯೋಣ.
ಎಡಭಾಗದಲ್ಲೆಲ್ಲ ಬಾಳೆತೋಟ. ಆದರೆ ಮಧ್ಯೆ ಅಲ್ಲಲ್ಲಿ ಸಪೋಟ/ಚಿಕ್ಕು ಮರಗಳು.
ಬಲಭಾಗದಲ್ಲಿ ದನದ ಕೊಟ್ಟಿಗೆ ಮತ್ತು ನಮ್ಮ ವಾಸದ ಮನೆ.
ಕುಪ್ಪಳಿಸುವ ಕರು, ಕುರಿಮರಿಗಳು, ಅಮ್ಮನ ಹಿಂದೆ ಸಾಲಾಗಿ ಸಾಗುವ ಕೋಳಿಮರಿಗಳು...

ಇಲ್ಲಿಂದ ಮತ್ತೆ ಬಲಕ್ಕೆ ತಿರುಗಿದರೆ ಎಡಭಾಗದಲ್ಲಿ ಕೃಷಿ ಕಾರ್ಮಿಕರ ಮನೆಗಳು ಮತ್ತು  ಅದರ ಹಿಂಭಾಗದಲ್ಲಿ ಮಾವಿನ ತೋಪು.
ಇನ್ನೂ ಕೆಳಗೆ ಮುಂದುವರೆದಾಗ ಎಡಕ್ಕೆತೆಂಗಿನ ಮರಗಳ ಸುಂದರ ಚಿತ್ರ. ಅವುಗಳ ಮಧ್ಯೆ ಬಾಳೆ ಮತ್ತು ನಿಂಬೆಗಿಡಗಳ ದೃಶ್ಯ.
ಬಲಭಾಗದಲ್ಲಿ ಹೂವರಳಿ ನಿಂತ  ಮನಮೋಹಕ ಗುಲಾಬಿಗಿಡಗಳ ಜೊತೆ ಅಲ್ಲೊಂದು-ಇಲ್ಲೊಂದು ಲಿಚಿ ಮರಗಳು.
ಮಾವಿನ ತೋಪಿನ ಎತ್ತರದ ಸ್ಥಳದಿಂದ ಇಡೀ ತೋಟದ ವಿಹಂಗಮ ನೋಟ ಕಣ್ಣಿಗೆ ಹಬ್ಬ. ಮಾವು, ತೆಂಗು, ಬಾಳೆ, ನಿಂಬೆ, ಇತ್ಯಾದಿಗಳ ಹಸಿರು ನೋಡುವುದೇ ಒಂದು ಸಂಭ್ರಮ.

ಮತ್ತೆ ಬಲಕ್ಕೆ ತಿರುಗಿ ಸಾಗೋಣ.
ಎಡಭಾಗದಲ್ಲಿ ಕಣ್ಣಾಮುಚ್ಚಾಲೆ ಆಡಲು ಪ್ರಸಕ್ತವಾದ ಬಾಳೆತೋಟ.
ಬಲಕ್ಕೆ ಥರಾವರಿ ಹಣ್ಣಿನ ಗಿಡಗಳು. ದಾಳಿಂಬೆ, ಸೀಬೆ/ಪೇರಳೆ , ಚೆರಿ, ಪ್ಲಮ್, ಜೀಗುಜ್ಜೆ/ಬ್ರೆಡ್ ಫ್ರೂಟ್, ನೀರು ಹಲಸು, ಅಮಟೆ, ಲವಂಗ, ಜಾಯಿಕಾಯಿ, ಬಟರ್ ಫ್ರೂಟ್/ಅವಕಾಡೊ, ವಿವಿಧ ರೀತಿಯ ಅಂಜೂರ, ನೇರಳೆ, ಹುಣಸೆ, ವಿಧವಿಧ ಹಲಸು, ಸ್ಟಾರ್ ಫ್ರೂಟ್, ಡ್ರಾಗನ್ ಫ್ರೂಟ್, ಮ್ಯಾಂಗೋಸ್ಟೇನ್, ಸೀತಾಫಲ, ರಾಮಫಲ, ಲಕ್ಷ್ಮಣಫಲ, ವಾಟರ್ ಆಪಲ್, ಇತ್ಯಾದಿ.

ಒಂದು ಸುತ್ತು ಮುಗಿದೇ ಹೋಯ್ತಲ್ಲ! ಮತ್ತೆ ಕಲ್ಯಾಣಿ ಬಂದೇಬಿಟ್ತು! ಒಂದೂವರೆ ಕಿಲೋಮೀಟರ ನಡೆದದ್ದೇ ಗೊತ್ತಾಗ್ಲಿಲ್ಲ...
ದಾರಿಯುದ್ದಕ್ಕೂ ಹಲವು ರೀತಿಯ ಪಕ್ಷಿಗಳನ್ನು ಗಮನಿಸಿದ್ದೀರಾ ತಾನೇ?
ಎತ್ತರಕ್ಕೆ ಬೆಳೆದು ನಿಂತಿರುವ ಹೆಬ್ಬೇವಿನ ಮರಗಳನ್ನೂ ನೋಡದೆ ಇರಲಾರಿರಿ. ಇವು ನಾವು ನೆಟ್ಟ ಮರಗಳಲ್ಲ. ಗೊಬ್ಬರದಲ್ಲಿ ಬಂದ ಬೀಜ ಮರವಾಗಿದ್ದು!

ತೋಟದ ಸುತ್ತಲಿನ ತಂತಿ ಬೇಲಿ? ಅದೇ ಸೋಲಾರ್ ದು!
ಅಲ್ಲಲ್ಲಿ ಹರಿದಾಡುತ್ತಿರುವ ಕಪ್ಪು ಪೈಪ್ ಗಳು??? ಅವೆಲ್ಲ ಹನಿ ನೀರಾವರಿಗೆ...
ಅದಕ್ಕೆ ನೀರು??? ೩ ಬೋರ್ ವೆಲ್ ಗಳಿಂದ.
ಬೋರ್ ವೆಲ್ ಗೆ ನೀರು? ಪಕ್ಕದ ಕೆರೆ ಮತ್ತು ಮಳೆ ಕೊಯ್ಲಿನಿಂದ.
ಅವುಗಳಿಗೆ ನೀರು? ಮೋಡ/ಮಳೆಯಿಂದ.
ಮೋಡ ಮಳೆಗೆ ನೀರು? ತೋಟದ ಮರಗಳಿಂದ!

No comments:

Post a Comment